ಬಚಾವತ್ ಆಯೋಗದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟ 519 ರಿಂದ 524 ಮೀ. ಎತ್ತರಿಸಿ ವಿಜಯಪುರ, ಬಾಗಲಕೋಟ ಜಿಲ್ಲೆಗಳ ಏತ ನೀರಾವರಿ ಯೋಜನೆಗಳಿಗೆ ಬೇಕಾದ ನೀರನ್ನು ಬಳಸಿಕೊಳ್ಳುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಆಲಮಟ್ಟಿ ಜಲಾಶಯ ಎತ್ತರದಿಂದ ಮಹಾರಾಷ್ಟ್ರ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಆಧಾರರಹಿತ ಆರೋಪ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಖಂಡನೀಯ ಎಂದರು.
ಮಳೆಗಾಲದಲ್ಲಿ ಕೃಷ್ಣಾ ನದಿಗೆ ನೀರಿನ ಹರಿವು ಹೆಚ್ಚಾಗಿ ಮಹಾಪೂರ ಬಂದಾಗ ಆಲಮಟ್ಟಿ ಜಲಾಶಯ ಸೇರಿ ಎಲ್ಲಾ ಜಲಾಶಯಗಳ ಗೇಟ್ ಗಳನ್ನು ಮುಚ್ಚುವುದಿಲ್ಲ, ಬಂದಂತಹ ನೀರು ಸಮುದ್ರಕ್ಕೆ ಹರಿದು ಹೋಗುತ್ತದೆ. ಅಲ್ಲದೇ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಮೂರು ರಾಜ್ಯಗಳಿಗೆ ಹಂಚಿಕೆಯಾಗಿರುವ ನೀರಿನಲ್ಲಿ ಈ ಮೊದಲು ಆಂಧ್ರದ ಭಾಗವಾಗಿದ್ದ ತೆಲಂಗಾಣ ರಾಜ್ಯ ಆಂಧ್ರಪ್ರದೇಶದ ಪಾಲಿನ ನೀರಿನಲ್ಲಿ ಹಂಚಿಕೆ ಮಾಡಿಕೊಳ್ಳಬೇಕೇ ಹೊರತು ಈ ಮೂರು ರಾಜ್ಯಗಳ ಪಾಲಿನಲ್ಲಿ ಅಲ್ಲ. ಹಾಗಾಗಿ ಡ್ಯಾಂ ಎತ್ತರದಿಂದ ಪ್ರವಾಹವಾಗುತ್ತದೆಂಬ ಆಂಧ್ರಪ್ರದೇಶದ ವಾದ ಹಾಗೂ ನೀರಿನ ಹಂಚಿಕೆ ವಿಷಯದಲ್ಲಿ ತೆಲಂಗಾಣ ತಕರಾರು ಅರ್ಥಹೀನ. ಡ್ಯಾಂ ಎತ್ತರ ಹೆಚ್ಚಳದಿಂದ ಮಹಾರಾಷ್ಟ್ರದ ಒಂದಿಂಚೂ ಭೂಮಿ ಹಾನಿಯಾಗದು ಎಂದು ಬೆಳ್ಳುಬ್ಬಿ ಸ್ಪಷ್ಟಪಡಿಸಿದರು.
ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ನೂರಾರು ಗ್ರಾಮಗಳು ಮುಳುಗಡೆಯಾಗಿ ಭೂಮಿ ತ್ಯಾಗ ಮಾಡಿದ ಸಂತ್ರಸ್ತರಿಗೆ ಈಗಾಗಲೇ ಸಾಕಷ್ಟು ಅನ್ಯಾಯವಾಗಿದೆ. ಈ ಭಾಗದ ರೈತರು ಈಗಲೂ ನೀರು ಬಳಕೆ ಮಾಡದಿದ್ದರೆ ಆಲಮಟ್ಟಿ ಜಲಾಶಯ ಅವಳಿ ಜಿಲ್ಲೆಗಳಿಗೆ ಇದ್ದು ಇಲ್ಲದಂತಾಗಿ ಕೇವಲ ರಾಯಚೂರು, ಕಲಬುರಗಿಗೆ ನೀರು ಹರಿಸುವ ಜಲಾಶಯವಾಗುತ್ತದೆ. ಇದಕ್ಕೆ ಅವಳಿ ಜಿಲ್ಲೆ ರೈತರ ತೀವ್ರ ವಿರೋಧವಿದೆ ಎಂದು ಬೆಳ್ಳುಬ್ಬಿ ಆಕ್ರೋಶ ಹೊರಹಾಕಿದರು.
ಆಲಮಟ್ಟಿ ಜಲಾಶಯ 524 ಮೀ. ಎತ್ತರಿಸುವುದರಿಂದ 20 ಸಾವಿರ ಎಕರೆ ಭೂಮಿ, 22 ಗ್ರಾಮಗಳು ಮುಳುಗಡೆಯಾಗಿ ಸಂತ್ರಸ್ತರಿಗೆ ಪರಿಹಾರಧನ, ಪುನರ್ವಸತಿ ಕಲ್ಪಿಸಲು ಅಂದಾಜು 1ಲಕ್ಷ ಕೋಟಿ ಹಣ ಬೇಕಾಗುತ್ತದೆ. ಹಿಂದೆ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದ ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಚೆಕ್ ನೀಡುವ ಕೆಲಸ ಆರಂಭಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪರಿಹಾರಧನ ನೀಡುವ ಕೆಲಸ ನಿಲ್ಲಿಸಿದ್ದೇಕೆ..? ಎಂದು ಬೆಳ್ಳುಬ್ಬಿ ಪ್ರಶ್ನಿಸಿದರು.
ಆಲಮಟ್ಟಿ ಜಲಾಶಯ ಎತ್ತರಿಸಲು ಕೊರ್ಟ್ ನಲ್ಲಿ ಆದೇಶ ಹಾಗೂ ಕೇಂದ್ರ ಸರ್ಕಾರದಿಂದ ಗೆಜೆಟ್ ಹೊರಡಿಸಲು ನಮ್ಮ ಸಂಸದರೊಂದಿಗೆ ಕೇಂದ್ರಕ್ಕೆ ನಾವು ಒತ್ತಾಯಿಸುತ್ತೇವೆ, ಅದು ನಮ್ಮ ಜವಾಬ್ದಾರಿ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ನೆಪ ಹೇಳಬಾರದು. ಹಿಂದೇ ದೇವೇಗೌಡರು, ಎಸ್.ಎಂ.ಕೃಷ್ಣಾ ಅವರು ಕೃಷ್ಣಾ ಬಾಂಡ್ ಎಂದು ಮಾಡಿ ಮಾರಾಟ ಮಾಡಿ ಹಣ ಸಂಗ್ರಹಿಸಿ ಕೃಷ್ಣಾ ಮೊದಲ ಹಂತ ಆರಂಭಿಸಿದ್ದರು. ಈಗಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಅವರು ಸಹ ಕೃಷ್ಣಾ ಬಾಂಡ್ ಮಾಡಿ ಮಾರಾಟ ಮಾಡಿಯಾದರೂ ಒಟ್ಟಿನಲ್ಲಿ ಆಲಮಟ್ಟಿ ಸಂತ್ರಸ್ತರಿಗೆ ಪರಿಹಾರಧನ ನೀಡಲು 1 ಲಕ್ಷ ಕೋಟಿ ಹಣ ನೀಡಬೇಕು. ಇದು ವಿಜಯಪುರ ಜಿಲ್ಲೆಯ ರೈತರ ಅಳಿವು,ಉಳಿವಿನ ಪ್ರಶ್ನೆ ಎಂದು ಮಾಜಿ ಸಚಿವ ಬೆಳ್ಳುಬ್ಬಿ ಆಗ್ರಹಿಸಿದರು.

ಕಾಮೆಂಟ್ ಪೋಸ್ಟ್ ಮಾಡಿ